ಕೊಟೇಶ್ವರ ಜುಲೈ 07 : ವಕ್ವಾಡಿ ಗುರುಕುಲ ಶಾಲಾ ಪುಟಾಣಿಗಳಿಗಾಗಿ “ ಚಿಟ್ಟೆಗಳ ಲೋಕದಲ್ಲಿ ಚಿಣ್ಣರ ಚಿಲಿಪಿಲಿ “ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು . ಮೊದಲಿಗೆ ಪುಟಾಣಿಗಳು ತಮ್ಮ ಬಣ್ಣ-ಬಣ್ಣದ ಕೊಡೆಗಳನ್ನು ಹಿಡಿದು ಶಿಕ್ಷಕಿಯರ ಜೊತೆ ಸೇರಿ ಚಿಟ್ಟೆಗಳ ತೋಟಕ್ಕೆ ಹೋದರು. ತೋಟದಲ್ಲಿ ಬಣ್ಣ-ಬಣ್ಣದ ಚಿಟ್ಟ್ಟೆಗಳು ಹೂವಿಂದ ಹೂವಿಗೆ ಹಾರಿ ಮಕರಂದ ಹೀರುವ ಪರಿಯನ್ನು ನೋಡುತ್ತಾ, ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ ಎನ್ನುವ ಹಾಡಿಗೆ ಕುಣಿದು ಕುಪ್ಪಳಿಸಿದರು. ನಂತರ ಪುಟಾಣಿಗಳಿಗೆ ಇಂಗು ಬಾವಿ, ಸ್ವಾಮಿ ವಿವೇಕಾನಂದ ಮೂರ್ತಿ ಮತ್ತು ವಿವಿಧ ಮರಗಳ ಪರಿಚಯ ಮಾಡಿಸಲಾಯಿತು. ಕೊನೆಯಲ್ಲಿ ಪುಟಾಣಿ ಮಕ್ಕಳು ಕಳೆದ ವಾರ ತಾವೇ ತಯಾರಿಸಿದ ಬೀಜದ ಉಂಡೆ ( ಸೀಡ್ ಬಾಲ್ ) ಗಳನ್ನು ತಮ್ಮ ಶಾಲಾ ಕಟ್ಟಡದ ಹೊರಭಾಗದಲ್ಲಿ ಮಣ್ಣಿನ ಏರಿಗಳನ್ನು ಮಾಡಿ ಅವುಗಳಲ್ಲಿ ಬೀಜದ ಉಂಡೆಗಳನ್ನು ಇಟ್ಟು, ನೀರನ್ನು ಸಿಂಪಡಿಸಿದರು. ಈಗಾಗಲೇ ಕೆಲವು ಬೀಜದ ಉಂಡೆಗಳಲ್ಲಿ ಬೀಜಗಳು ಮೊಳಕೆಯೊಡೆದು ಬೆಳೆಯಲಾರಂಭಿಸಿದೆ, ಅವುಗಳನ್ನು ನೋಡಿ ಪುಟಾಣಿಗಳಿಗೆ ಬೀಜದಿಂದ ಮರ, ಗಿಡ, ಬಳ್ಳಿಗಳು ಹೇಗೆ ಬೆಳೆಯುತ್ತವೆ ಎಂಬ ನೈಜ ಚಿತ್ರಣ ನೋಡಿದಂತೆ ಆಯಿತು.
ಹೀಗೆ ಪುಟಾಣಿಗಳು ಈ ದಿನದ ಪಾಠವನ್ನು ನಾಲ್ಕು ಗೋಡೆಯ ಮಧ್ಯದಲ್ಲಿ ಕುಳಿತು ಕೇಳುವ ಬದಲು ನಿಸರ್ಗದ ಸೊಬಗನ್ನು ನೋಡುತ್ತಾ , ಮಲಿನ ಮುಕ್ತ ಶಾಲಾ ಪರಿಸರದ ಹಸುರಿನ ರಸದೌತಣವನ್ನು ಚಿಟ್ಟೆಗಳ ಲೋಕದೊಳಗಡೆ ಸವಿದರು.