ವಕ್ವಾಡಿ: ಧಾನ್ಯ ಸಿರಿ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಖಾದರ್

ಮೈಸೂರಿನ ಆಹಾರ ವಿಜ್ಞಾನಿ ಡಾ.ಖಾದರ್ ಧಾನ್ಯಸಿರಿ-ದೇಶಿ ಆಹಾರ ಪದ್ಧತಿ ಕುರಿತು ಉಪನ್ಯಾಸ ನೀಡಿದರು.
ಕುಂದಾಪುರ : 6 ವರ್ಷದ ಹೆಣ್ಮಗು ಋತುಮತಿಯಾಗುತ್ತಿದ್ದಾಳೆ. 10 ವರ್ಷದ ಬಾಲಕರಿಗೆ ಮಧುಮೇಹ ಕಾಣಿಸುತ್ತಿದೆ. ಅತಿಯಾದ ವಾಣಿಜ್ಯೀಕರಣದಿಂದ ಆಹಾರ ಪದ್ದತಿಯಲ್ಲಿ ಭಿನ್ನತೆ ಸೃಷ್ಟಿಯಾಗಿದ್ದು ಮನುಕುಲ ಅಪಾಯದಂಚಿಗೆ ಸಿಲುಕಿದೆ ಎಂದು ಮೈಸೂರಿನ ಪ್ರಸಿದ್ದ ಆಹಾರ ವಿಜ್ಞಾನಿ ಡಾ.ಖಾದರ್ ಹೇಳಿದರು.
ವಕ್ವಾಡಿ ಗುರುಕುಲ ವಿದ್ಯಾಸಂಸ್ಥೆ ಬಾಂಡ್ಯ ಎಜುಕೇಶನಲ್ ಟ್ರಸ್ಟ್ ಭಾನುವಾರ ಹಮ್ಮಿಕೊಂಡ ಧಾನ್ಯ ಸಿರಿ ದೇಶಿ ಆಹಾರ ಪದ್ದತಿ ಕುರಿತಾಗಿನ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತಾನಾಡಿದರು.
ಪ್ರಪಂಚದಾದ್ಯಂತ ಇಂದು ಕೃತಕ ಹಾಲು ಬಿಕರಿಯಾಗುತ್ತಿದೆ. ತಾಯಿಯ ಎದೆ ಹಾಲು ಮಗುವಿಗೆ ಶ್ರೇಷ್ಠ. ಅದು ಕೂಡ 3 ವರ್ಷದ ತನಕ ಮಾತ್ರ. ತದನಂತರದ ಹಾಲು ಸೇವನೆ ಕೆಟ್ಟ ಪರಿಣಾಮವನ್ನೇ ಸೃಷ್ಟಿಸುತ್ತದೆ. ಕೃತಕ ಹಾಲು ಇಂದು ಪ್ರಪಂಚದ ಎಲ್ಲ ದೇಶವನ್ನು ತಲುಪುತ್ತಿದೆ. ಕಳೆದ 40-50 ವರ್ಷಗಳಿಂದೀಚೆಗೆ ಮನುಷ್ಯನ ಅನಾರೋಗ್ಯ ಹೆಚ್ಚಿದೆ. ಆರೋಗ್ಯವಂತರನ್ನು ಕಾಣುವುದೇ ಅಪರೂಪ ಎಂಬಂತಾಗಿದೆ. ಹಾಲು ಕುಡಿದರೆ ಕ್ಯಾಲ್ಸಿಯಂ ಸಗುತ್ತೆ ಅಂತಾ ನಂಬಿಸಲಾಗುತ್ತಿದೆ. 1 ಲೀಟರ್ ಹಾಲಿನಲ್ಲಿ ಸಿಗುವುದು 1 ಗ್ರಾಂ ಕ್ಯಾಲ್ಸಿಯಂ ಮಾತ್ರ. ಇದು ನಾಲಗೆಯಿಂದ ಕೆಳಗಿಳಿದು ದೇಹದ ಸೂಕ್ಷ್ಮ ಜೀವಿಗಳನ್ನು ಸಹ ತಲುಪದು. ಬಹುರಾಷ್ಟ್ರೀಯ ಕಂಪನಿಗಳ ನಾಗಾಲೋಟ ಭಾರತದ ದೇಶಿಯ ಆಹಾರ ಪದ್ದತಿಯ ಮೇಲೆ ಗದಾಪ್ರಹಾರ ನಡೆಸುತ್ತಿದೆ ಎಂದರು.
ಔಷಧೀಯ ಕಂಪನಿಗಳು, ಆಸ್ಪತ್ರೆಗಳು ದಿನದಿಂದ ದಿನಕ್ಕೆ ಬೆಳೆಯುತ್ತಿವೆ. ಇನ್ನೊಂದೆಡೆ ಮನುಷ್ಯ ಕೂರಲಾಗದ ಏಳಲಾಗದ ಹಂತಕ್ಕೆ ಬಂದು ತಲುಪಿದ್ದಾನೆ. ಹಿತ್ತಲಲ್ಲಿ ಇರಬೇಕಾದ ಕಕ್ಕಾಸು ಬೆಡ್‍ರೂಂಗೆ ಬಂದು ತಲುಪಿದೆ. ಅವೈಜ್ಞಾನಿಕ ಆಹಾರವನ್ನು ವೈಜ್ಞಾನಿಕ ಎಂದು ನಂಬಿಸಲಾಗುತ್ತಿದೆ. ಭಾರತದಲ್ಲಿ 100ಕ್ಕೆ 28 ಮಂದಿ ಡಯಾಬಿಟಿಸ್ ರೋಗಿಗಳಿದ್ದಾರೆ. 60 ಮಂದಿ ಬಿಪಿ ಪ್ರಾಬ್ಲಂ, 32 ಮಂದಿಗೆ ಥೈರಾಯ್ಡ್, 28 ಮಂದಿಯಲ್ಲಿ ವೀರ್ಯಕಣ ನಷ್ಟದ ಸಮಸೈ, 6 ಮಂದಿಗೆ ಪಾಶ್ರ್ವವಾಯು , 10 ಮಂದಿಗೆ ಫಿಟ್ಸ್ ರೋಗವಿದೆ. 2013-14 ನೇ ಸಾಲಿನಲ್ಲಿ ಡಯಾಬಿಟಿಸ್ ಕಾಯಿಲೆಗೆ ಒದಗಿಸುವ ಔಷಧಗಳಿಂದ ಕಂಪನಿಗೆ ಬಂದಿರುವ ಲಾಭ 50 ಸಾವಿರ ಶತಕೋಟಿ. ಅದರಲ್ಲಿ ಭಾರತದ ಪಾಲು 18 ಸಾವಿರ ಶತಕೋಟಿ. ದೇಶಿ ಆಹಾರ ಪದ್ದತಿ ಮೂಲೆಗುಂಪು ಮಾಡಿದ ಪ್ರತಿಫಲವೆಂಬಂತೆ ಕೆಟ್ಟ ಆಹಾರ ಸೇವಿಸಿ ಅದರಿಂದ ರೋಗಗ್ರಸ್ತರಾಗಿ ಬದುಕುವ ಪ್ರಮೇಯ ನಮ್ಮದಾಗಿದೆ. ಹೈಟೆಕ್ ಆಸ್ಪತ್ತೆಯಲ್ಲೂ ರೋಗ ವಾಸಿಯಾಗಲ್ಲ ಎಂಬ ಪರಿಸ್ಥಿತಿ ಬಂದಿದೆ. ಎಂದು ಕಳವಳ ವ್ಯಕ್ತಪಡಿಸಿದರು.
ಬಾಂಡ್ಯ ಎಜುಕೇಶನಲ್ ಟ್ರಸ್ಟ್‍ನ ಸಂಚಾಲಕ ಬಿ.ಅಪ್ಪಣ್ಣ ಹೆಗ್ಡೆ, ಟ್ರಸ್ಟಿಗಳಾದ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ, ಅನುಪಮಾ ಎಸ್.ಶೆಟ್ಟಿ ಉಪಸ್ಥಿತರಿದ್ದರು. ಉಪನ್ಯಾಸಕ ರಾಘವೇಂದ್ರ ಪ್ರಾರ್ಥಿಸಿದರು. ಉಪನ್ಯಾಸಕ ರಾಮಚಂದ್ರ ಕಾರ್ಯಕ್ರಮ ನಿರ್ವಹಿಸಿದರು.

 

ಭೂಮಿ ಬದುಕಿಸಿ

ಮನುಷ್ಯ ದೇಹದಲ್ಲಿರುವ ಒಂದೊಂದು ಕಣ ಒಂದೊಂದು ಜೀವ. ಅವು ನಿರಂತರ ಬದುಕಿದ್ದರೆ ಮಾತ್ರ ದೇಹದಲ್ಲಿ ಜೀವವಿದೆ ಎಂದು ಹೇಳಬಹುದಾದ ಸ್ಥಿತಿಯಿರುತ್ತದೆ. ಹಾಗೆಯೇ ಭೂಮಿಯಲ್ಲಿರುವ ಅಸಂಖ್ಯಾತ ಸೂಕ್ಷ್ಮಾಣುಗಳಿಲ್ಲದೆ ಭೂಮಿ ಬದುಕುವುದು ಸಾಧ್ಯವಿಲ್ಲ. ಭೂಮಿಗೆ ಸೂಕ್ಷ್ಮಾಣು ಜೀವಿಗಳೆ ಜೀವ. ಇವು ಸತ್ತರೆ ಭೂಮಿ ಸಾಯುತ್ತದೆ. ವೈಜ್ಞಾನಿಕ ವ್ಯವಸಾಯ ಪದ್ದತಿಯಡಿ ಬಳಕೆ ಮಾಡಲಾಗುತ್ತಿರುವ ರಾಸಾಯಿನಿಕಗಳಿಂದ ಭೂಮಿ ಅಪಾಯಕ್ಕೆ ಸಿಲುಕಿದೆ. ಸಿರಿಧಾನ್ಯಗಳು, ನೈಸರ್ಗಿಕ ಆಹಾರ ಮತ್ತು ಮನೆ ಮದ್ದುಗಳ ಬಳಕೆ ಹೆಚ್ಚಾಗಬೇಕು. ಆ ಮೂಲಕ ಡಯಾಬಿಟಿಸ್, ಥೈರಾಯ್ಡ್, ಪಿಸಿಓಡಿ, ಕ್ಯಾನ್ಸರ್, ಹಾರ್ಟ್‍ಡಿಸೀಸ್ ದೂರವಿಡಿ.